ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಡಿ.17): ಆಧುನಿಕ ಯುಗದಲ್ಲಿ ಎಲ್ಲರನ್ನು ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತಿರುವ ಒತ್ತಡದಿಂದ ಹೊರಬರಬೇಕಾದರೆ ಆಧ್ಯಾತ್ಮದ ಪಾಲನೆ ಬಹಳ ಮುಖ್ಯ ಎಂದು ಅಭಿಯಂತರರಾದ ಶ್ವೇತಾ ತಿಳಿಸಿದರು.
ರಿದ್ದಿ ಫೌಂಡೇಶನ್ ಟ್ರಸ್ಟ್ ವತಿಯಿಂದ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ರಿದ್ದಿ ವಿಶ್ವಜಿತ್ ಅನುಭೂತಿ ಶಿಬಿರ ಉದ್ಘಾಟಿಸಿ ಒತ್ತಡ ಮುಕ್ತತೆ ಹಾಗೂ ಯಶಸ್ಸು ಎಂಬ ವಿಚಾರ ಸಂಕಿರಣ ಕುರಿತು ಮಾತನಾಡಿದರು.
ಕೆಲವೊಮ್ಮೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಂದ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ. ಆಗ ನಾನಾ ರೀತಿಯ ಕಾಯಿಲೆಗಳು ಮನುಷ್ಯನನ್ನು ಕಾಡುವುದು ಸಹಜ. ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಂಡಾಗ ದೀರ್ಘ ಕಾಲದವರೆಗೆ ಮಾತ್ರೆ, ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯದಿಂದ ಇರಬೇಕಾದರೆ ಮನಸ್ಸಿಗೆ ಶಾಂತಿ ಬೇಕು. ಅದಕ್ಕಾಗಿ ಆಧ್ಯಾತ್ಮದ ಕಡೆ ಒಲವು ಮೂಡಿಸಿಕೊಳ್ಳುವುದು ಒಳಿತು ಎಂದು ಹೇಳಿದರು.
ಪ್ರಕೃತಿ ಅನೇಕ ಸ್ವಾಭಾವಿಕ ಸಂಪತ್ತುಗಳನ್ನು ನೀಡಿದೆ. ಅವುಗಳ ಮಹತ್ವ ಅರಿತು ಸದುಪಯೋಗಪಡಿಸಿಕೊಂಡಾಗ ಒತ್ತಡರಹಿತ ಜೀವನ ಕಂಡುಕೊಳ್ಳಬಹುದು. ಜೀವನಕ್ಕೆ ಆಧ್ಯಾತ್ಮಿಕ ಬುನಾದಿ ಹಾಕಿದಾಗ ಮಾನಸಿಕವಾಗಿ ಆತ್ಮಸ್ಥೈರ್ಯ ತುಂಬುತ್ತದೆ. ಹಾಗಾಗಿ ರಿದ್ದಿ ಫೌಂಡೇಶನ್‍ನ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ವಿನಂತಿಸಿದರು.
ರಿದ್ದಿ ಫೌಂಡೇಶನ್ ಟ್ರಸ್ಟ್‍ನ ಕೋಶಾಧಿಕಾರಿ ಶ್ರೀಮತಿ ಶೋಭ ಅಧ್ಯಕ್ಷತೆ ವಹಿಸಿದ್ದರು.
ವಾಣಿಜ್ಯೋದ್ಯಮಿ ಸುರೇಶ್‍ಬಾಬು, ಚಿನ್ನ ಬೆಳ್ಳಿ ವರ್ತಕರ ಸಂಘದ ಅಧ್ಯಕ್ಷ ಕೆ.ಕೃಷ್ಣಪ್ಪ, ಪತ್ರಕರ್ತ ಟಿ.ತಿಪ್ಪೇಸ್ವಾಮಿ ಸಂಪಿಗೆ, ನವರತ್ನ ಸಗಟು ವ್ಯಾಪಾರಿ ಮುಖೇಶ್, ವಾಣಿಜ್ಯೋದ್ಯಮಿ ದರ್ಶನ್, ಪೊಲೀಸ್ ಅಧಿಕಾರಿ ರೇವತಿ ವೇದಿಕೆಯಲ್ಲಿದ್ದರು.