ಚಿಕ್ಕಬಳ್ಳಾಪುರ: ಇಂದು ಜಿಲ್ಲೆಯ ಹೊರವಲಯದಲ್ಲಿ ದಿ.ಮಂಗಿಶೆಟ್ಟಿ ನರಸಿಂಹಯ್ಯ ರಂಗಯ್ಯ ಟ್ರಸ್ಟ್ ಹಾಗೂ ಜೈನ್ ಮಿಷನ್ ಆಸ್ಪತ್ರೆ ವತಿಯಿಂದ ಉಚಿತ ಕೃತಕ ಕಾಲು ಜೋಡಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಎಂಟಿಬಿ ನಾಗರಾಜ್ ಮುಖ್ಯ ಅತಿಥಿಯಾಗಿ ಬಂದಿದ್ದರು. ಈ ವೇಳೆ ಹಿಂದೆ ಮುಂದೆ ಯೋಚಿಸದೆ ಪಟ್ ಅಂತ ಒಂದೇ ನಿಮಿಷದಲ್ಲಿ 35 ಲಕ್ಷ ಹಣವನ್ನು ದಾನವಾಗಿ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಸಚಿವ ಎಂಟಿಬಿ ನಾಗರಾಜ್ ಅವರು, ದಿ. ಮಂಗಶೆಟ್ಟಿ ನರಸಿಂಹಯ್ಯ ಅವರನ್ನು ಕೊಂಡಾಡಿದರು. ಕೂಲಿ ಕೆಲಸ ಮಾಡುತ್ತಾ, ಆದರ್ಶ ಜೀವನ ನಡೆಸುತ್ತಿದ್ದ ಮಂಗಶೆಟ್ಟಿ ಅವರು ಪರಿಶ್ರಮದಿಂದ ಸ್ವಂತವಾಗಿ ಆಸ್ತಿಯನ್ನು ಮಾಡಿದ್ದರು. ಬಳಿಕ ಎಲ್ಲಾ ಆಸ್ತಿಯನ್ನು ಟ್ರಸ್ಟ್ ಗೆ ಸೇರಿಸಿ ಆ ಮೂಲಕ ಸಮಾಜ ಸೇವೆಯನ್ನು ಮಾಡುತ್ತಿದ್ದವರು. ಅವರ ನಿಧನದ ನಂತರವೂ ಟ್ರಸ್ಟ್ ನಲ್ಲಿ ಸಮಾಜಮುಖಿ ಕೆಲಸಗಳು ಮುಂದುವರೆಯುತ್ತಿವೆ.
ಟ್ರಸ್ಟ್ ನವರು ಕೂಡ ಸಚಿವರಿಗೆ ಮನವಿ ಮಾಡಿದ್ದರು. ಟ್ರಸ್ಟ್ ನ ಸಮಾಜಮುಖಿ ಕೆಲಸಗಳನ್ನು ಅರಿತ ಎಂಟಿಬಿ ನಾಗರಾಜ್ ಅವರು ವೇದಿಕೆ ಮೇಲೆಯೇ 10 ಲಕ್ಷ ರೂಪಾಯಿ ದೇಣಿಗೆ ಘೋಷಿಸಿದರು. ಇದೇ ವೇಳೆ ಜೈನ್ ಮಿಷನ್ ಆಸ್ಪತ್ರೆ ಕೂಡ ಮನವಿ ಮಾಡಿದ್ದು, ಅವರಿಗೂ 25 ಲಕ್ಷ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.