ಬೆಂಗಳೂರು: ನವರಾತ್ರಿ ಹಬ್ಬಕ್ಕೆ ಮುರುಘಾ ಮಠಕ್ಕೆ ಸಿಹಿ ಸುದ್ದಿಯನ್ನು ಹೈಕೋರ್ಟ್ ನೀಡಿದೆ. ಅಕ್ಟೋಬರ್ ತಿಂಗಳ ವೇತನದ ಚೆಕ್ ಗಳಿಗೆ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಸಹಿ ಹಾಕುವುದಕ್ಕೆ ಹೈಕೋರ್ಟ್ ಅಸ್ತು ಎಂದಿದೆ. ಅಕ್ಟೋಬರ್ ತಿಂಗಳ ಚೆಕ್ ಗಳಿಗೆ ಸಹಿ ಹಾಕುವುದಕ್ಕೆ ಷರತ್ತು ಬದ್ದ ಅನುಮತಿ ನೀಡಿದೆ.
ಷರತ್ತು ಬದ್ಧ ಅನುಮತಿಯಲ್ಲಿ ಹಲವು ಅಂಶಗಳನ್ನು ಸೇರಿಸಲಾಗಿದೆ. ಮುರುಘಾಶ್ರೀಗಳಿಂದ ವೇತನಕ್ಕೆ ಸಂಬಂಧಿಸಿದ ಚೆಕ್ ಗಳಿಗೆ ಮಾತ್ರ ಸಹಿ ಹಾಕಿಸಿಕೊಳ್ಳಬೇಕು. ಸಹಿ ಪಡೆಯಲು ಸಂಬಂಧಪಟ್ಟವರಿಗೆ ಚಿತ್ರದುರ್ಗದ ಸೆಂಟ್ರಲ್ ಜೈಲು ಅಧಿಕಾರಿಗಳಿಂದ ಅನುಮತಿ ಪಡೆಯಬೇಕಾಗಿದೆ. ಸಹಿ ಹಾಕುವ ವೇಳೆ ಜೈಲು ಅಧಿಕಾರಿ ಹಾಗೂ ತನಿಖಾಧಿಕಾರಿ ಜೊತೆಯಲ್ಲಿಯೇ ಇರಬೇಕು. ಈ ಆದೇಶ ಅಕ್ಟೋಬರ್ ತಿಂಗಳಿಗೆ ಮಾತ್ರ ಅನ್ವಯಿಸಲಿದೆ ಎಂದು ಆದೇಶದಲ್ಲಿ ತಿಳಿಸಿದೆ.
ವೇತನವಿಲ್ಲದೆ ವಿದ್ಯಾಪೀಠದ ಸಿಬ್ಬಂದಿಗಳು ಉಪವಾಸ ಇರಬಾರದು ಎಂದು ಹೈಕೋರ್ಟ್ ಈ ಆದೇಶ ನೀಡಿದೆ. ಅರ್ಜಿ ಸಲ್ಲಿಕೆಯಾದಾಗಲೂ ಕೋರ್ಟ್ ಇದನ್ನೇ ಹೇಳಿತ್ತು. ಯಾರನ್ನು ಉಪವಾಸ ಇರಿಸುವ ಉದ್ದೇಶ ಇಲ್ಲ ಎಂದೇ ಪ್ರಸ್ತಾಪಿಸಿತ್ತು. ಇದೀಗ ವಿಚಾರಣೆ ನಡೆಸಿದ ಹೈಕೋರ್ಟ್ ಮಾನವೀಯ ನೆಲೆಗಟ್ಟಿನಲ್ಲಿ ಆದೇಶ ನೀಡಿದೆ.