ವರದಿ ಮತ್ತು ಫೋಟೋ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, ಸುದ್ದಿಒನ್ , (ಸೆ.29): ದಸರಾ ನವರಾತ್ರಿ ಉತ್ಸವದ ನಿಮಿತ್ತ ಧವಳಗಿರಿ ಬಡಾವಣೆಯಲ್ಲಿರುವ ಶ್ರೀಮತಿ ಗೌರಿ(ಕೋಕಿಲ) ಸತ್ಯನಾರಾಯಣಚಾರ್ ದಂಪತಿಗಳು ತಮ್ಮ ನಿವಾಸದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ನೂರಾರು ಬಗೆಯ ಗೊಂಬೆಗಳನ್ನಿಟ್ಟು ಶ್ರದ್ದಾಭಕ್ತಿಯಿಂದ ದಿನವೂ ಪೂಜೆ ಸಲ್ಲಿಸುತ್ತಿದ್ದಾರೆ.
ಮರದಲ್ಲಿ ತಯಾರಿಸಿರುವ ಮೈಸೂರು ಅರಮನೆ, ಪಟ್ಟದ ಗೊಂಬೆ, ದಸರಾ ಆನೆಗಳು, ಶಿಕ್ಷಕರು, ಮಕ್ಕಳು, ಬೋರ್ಡ್ ಸ್ಕೂಲ್ ಸೆಟ್, ಮದುವೆ ಮಂಟಪ, ಪುರೋಹಿತರು, ವಧು-ವರರು, ರಾಮ, ಲಕ್ಷ್ಮಣ, ಸೀತೆ, ಆಂಜನೇಯ, ವೆಂಕಟೇಶ್ವರ ಪದ್ಮಾವತಿ, ರುಕ್ಮಿಣಿ, ಪಾಂಡುರಂಗ, ಋಷಿಮುನಿಗಳು, ಶಂಕರಾಚಾರ್ಯರು, ಸುಬ್ರಮಣ್ಯ, ಗಣೇಶ, ಈಶ್ವರ, ಪಾರ್ವತಿ, ನಂದಿ, ನಾರದ, ಚಾಮುಂಡೇಶ್ವರಿದೇವಿ, ಚನ್ನಪಟ್ಟಣದ ಗೊಂಬೆಗಳು ಆಕರ್ಷಣೀಯವಾಗಿವೆ.
ದಸರಾ ಅಲಂಕೃತ ಆನೆಗಳು, ಗಂಡ-ಹೆಂಡತಿ, ಅಜ್ಜ-ಅಜ್ಜಿ, ಮೊಮ್ಮಕ್ಕಳು ಹೀಗೆ ಹತ್ತು ಹಲವಾರು ಬಗೆಯ ಗೊಂಬೆಗಳನ್ನಿಟ್ಟು ಒಂಬತ್ತು ದಿನಗಳ ಕಾಲ ಪೂಜೆ ಸಲ್ಲಿಸಿ ಬನ್ನಿಪೂಜೆ, ಕಥೆ, ದೇವಿ ಮಹಾತ್ಮೆ ಓದುವುದು, ಪ್ರಸಾದ, ನೈವೇದ್ಯದ ನಂತರ ಗೊಂಬೆಗಳಿಗೆ ಆರತಿ ಬೆಳಗಲಾಗುತ್ತದೆ.
ನಮ್ಮ ತಾತನ ಕಾಲದಿಂದ ಸುಮಾರು ಐವತ್ತು ವರ್ಷಗಳ ಹಿಂದಿನಿಂದಲೂ ದಸರಾ ನವರಾತ್ರಿಯಲ್ಲಿ ಗೊಂಬೆ ಪೂಜೆ ನಡೆಸಿಕೊಂಡು ಬರುತ್ತಿದ್ದು, ಪೂರ್ವಿಕರ ಪದ್ದತಿಯಂತೆ ನಾವುಗಳು ಪ್ರತಿ ವರ್ಷ ನವರಾತ್ರಿಯಲ್ಲಿ ಒಂಬತ್ತು ದಿನಗಳ ಕಾಲ ಗೊಂಬೆಗಳನ್ನಿಟ್ಟು ಪೂಜಿಸುತ್ತಿರುವುದರಿಂದ ಮನಸ್ಸಿಗೆ ಶಾಂತಿ ಸಮಾಧಾನ ಸಿಗುತ್ತದೆಂಬ ನಂಬಿಕೆ ನಮ್ಮದು ಎಂದು ಶ್ರೀಮತಿ ಗೌರಿ(ಕೋಕಿಲ) ಸತ್ಯನಾರಾಯಣಚಾರ್ ದಂಪತಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು.