ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ : ಕಾಂಗ್ರೆಸ್ ಯುವ ನೇತಾರ ರಾಹುಲ್‍ಗಾಂಧಿರವರ ಭಾರತ್ ಜೋಡೋ ಐಕ್ಯತಾ ಯಾತ್ರೆ ಜಿಲ್ಲೆಗೆ ಆಗಮಿಸುತ್ತಿರುವುದು ಮಹಿಳೆಯರು ತಮ್ಮ ಸಂಘಟನೆಯನ್ನು ಪ್ರದರ್ಶಿಸಲು ಸಿಕ್ಕ ಒಳ್ಳೆಯ ಅವಕಾಶ ಎಂದು ಬೆಳಗಾಂ ಜಿಲ್ಲೆ ಖಾನಾಪುರ್ ಶಾಸಕಿ ಅಂಜಲಿ ನಿಂಬಾಳ್ಕರ್ ತಿಳಿಸಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್‍ನಿಂದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಭಾರತ್ ಜೋಡೋ ಪಾದಯಾತ್ರೆ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್‍ಗಾಂಧಿ ಹೊರಟಿರುವ ಪಾದಯಾತ್ರೆ ಅ.10 ರಂದು ಹಿರಿಯೂರು ಮೂಲಕ ಜಿಲ್ಲೆಗೆ ಆಗಮಿಸಲಿದ್ದು, ಅಂದು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಕ್ತಿ ಪ್ರದರ್ಶಿಸಬೇಕಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕೋಮುವಾದಿ ಬಿಜೆಪಿಯ ಬೆಲೆ ಏರಿಕೆ, ಭ್ರಷ್ಟಾಚಾರದ ವಿರುದ್ದ ಯಾತ್ರೆಯುದ್ದಕ್ಕೂ ರಾಹುಲ್‍ಗಾಂಧಿ ಜನತೆಯನ್ನು ಎಚ್ಚರಿಸಲಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕಿದೆ ಎಂದು ಮಹಿಳೆಯರಿಗೆ ತಾಕೀತು ಮಾಡಿದರು.
ಅ. 6 ಇಲ್ಲವೇ 7 ರಂದು ಪ್ರಿಯಾಂಕಗಾಂಧಿ ಮಂಡ್ಯಕ್ಕೆ ಆಗಮಿಸುತ್ತಿರುವುದರಿಂದ ಒಂದೊಂದು ತಾಲ್ಲೂಕಿನಿಂದ ಕನಿಷ್ಟ ಐದುನೂರು ಮಹಿಳೆಯರಾದರೂ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕು. ಬಳ್ಳಾರಿ ರ್ಯಾಲಿಗೆ ಒಂದರಿಂದ ಎರಡು ಲಕ್ಷ ಜನ ಸೇರುವ ನಿರೀಕ್ಷೆಯಿದೆ. ರಾಜ್ಯದಲ್ಲಿ ಇಪ್ಪತ್ತು ದಿನಗಳ ಕಾಲ ಪಾದಯಾತ್ರೆ ಸಂಚರಿಸಲಿದ್ದು, ಬಿಜೆಪಿ.ಗೆ ಹೆದರಿಕೆ ಶುರುವಾಗಿದೆ ಎಂದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶ್ರೀಮತಿ ಗೀತ ನಂದಿನಿಗೌಡ ಮಾತನಾಡಿ ಮುಂದಿನ ತಿಂಗಳು ಪ್ರಿಯಾಂಕಗಾಂಧಿ ಮಂಡ್ಯಕ್ಕೆ ಬರಲಿರುವುದರಿಂದ ನಮ್ಮ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಬೇಕು. ಎರಡರಿಂದ ಮೂರು ಸಾವಿರ ಮಹಿಳೆಯರನ್ನು ಕರೆ ತರುವ ಪ್ರಯತ್ನ ಮಾಡುತ್ತೇವೆ. ಸ್ವಸಹಾಯ ಸಂಘದ ಮಹಿಳೆಯರು, ಆಶಾ ಕಾರ್ಯಕರ್ತೆಯರಿಗೆ ಮನವಿ ಮಾಡಿದ್ದೇವೆ. ದೇಶದ ಐಕ್ಯತೆಗಾಗಿ ರಾಹುಲ್‍ಗಾಂಧಿ ಭಾರತ್ ಜೋಡೋ ಪಾದಯಾತ್ರೆ ಹೊರಟಿರುವುದಕ್ಕೆ ಎಲ್ಲರೂ ಬೆಂಬಲಿಸಬೇಕು ಎಂದು ವಿನಂತಿಸಿದರು.
ಹಿರಿಯೂರು ಮುಖಾಂತರ ಭಾರತ್ ಜೋಡೋ ಐಕ್ಯತಾ ಯಾತ್ರೆ ಜಿಲ್ಲೆ ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ಹೆಚ್ಚಿನ ಮಹಿಳೆಯರನ್ನು ಕರೆತರುತ್ತೇವೆಂದು ಗೀತ ನಂದಿನಿಗೌಡ
ಅಂಜಲಿ ನಿಂಬಾಳ್ಕರ್‍ರವರಿಗೆ ಭರವಸೆ ನೀಡಿದರು.
ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್ ಮಾತನಾಡುತ್ತ ಗಾಂಧಿ ಕುಟುಂಬಕ್ಕೆ ತ್ಯಾಗ ಬಲಿದಾನದ ಇತಿಹಾಸವಿದೆ. ಇಂದಿರಾಗಾಂಧಿ, ರಾಜಿವ್‍ಗಾಂಧಿ ಇವರುಗಳು ಪ್ರಾಣದ ಹಂಗು ತೊರೆದು ದೇಶ ಸೇವೆ ಮಾಡಿದ್ದಾರೆ. ನೆಹರು ಕುಡಿ ರಾಹುಲ್‍ಗಾಂಧಿ ಈಗ ಭಾರತ್ ಜೋಡೋ ಐಕ್ಯತಾ ಯಾತ್ರೆ ಹೊರಟಿರುವುದು ಕಾಂಗ್ರೆಸ್‍ಗೆ ಬಲ ಬಂದಂತಾಗಿದೆ. ಹಾಗಾಗಿ ನಮ್ಮ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಐಕ್ಯತಾ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳಾದ ಸವಿತಾ ರಘು, ಆರತಿ ಮಹಡಿ ಶಿವಮೂರ್ತಿ, ಚಳ್ಳಕೆರೆ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಗೀತಬಾಯಿ, ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಮೋಕ್ಷರುದ್ರಸ್ವಾಮಿ, ಹಿರಿಯೂರು ನಗರಸಭೆ ಅಧ್ಯಕ್ಷೆ ಶಿವರಂಜನಿ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮಿಕಾಂತ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‍ಕುಮಾರ್ ವೇದಿಕೆಯಲ್ಲಿದ್ದರು.