ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಇಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಮೇಲೆ ಮುಸುಕಿನ ದಾಳಿ ನಡೆಸಿದರು. ಇತ್ತೀಚಿನ ಕೆಲವೊಂದು ಘಟನೆಗಳನ್ನು ಉಲ್ಲೇಖಿಸಿ, ಪಕ್ಷವನ್ನು ಸರಣಿ ಕೊಲೆಗಾರನಿಗೆ ಹೋಲಿಸಿದ್ದಾರೆ.
ದೆಹಲಿ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ದೆಹಲಿ ಸಿಎಂ ಈ ಹೇಳಿಕೆ ನೀಡಿದ್ದಾರೆ. ಗೋವಾ, ಕರ್ನಾಟಕ, ಮಹಾರಾಷ್ಟ್ರ, ಅಸ್ಸಾಂ, ಎಂಪಿ, ಬಿಹಾರ, ಅರುಣಾಚಲ ಪ್ರದೇಶ, ಮಣಿಪುರ ಮತ್ತು ಮೇಘಾಲಯದಲ್ಲಿ ಇಲ್ಲಿಯವರೆಗೆ ದೇಶದಲ್ಲಿ ಹಲವಾರು ಸರ್ಕಾರಗಳನ್ನು ಉರುಳಿಸಿದ್ದಾರೆ. ನಗರದಲ್ಲಿ ಒಂದರ ಹಿಂದೆ ಒಂದು ಕೊಲೆ ಮಾಡುತ್ತಿರುವ ಸರಣಿ ಹಂತಕನೊಬ್ಬ ಇದ್ದಾನೆ. ಜನರು ಸರ್ಕಾರವನ್ನು ಆಯ್ಕೆ ಮಾಡುತ್ತಾರೆ, ಆದರೆ ಅವರು ಅದನ್ನು ಉರುಳಿಸುತ್ತಾರೆ ಎಂದು ಕೇಜ್ರಿವಾಲ್ ಹೇಳಿದರು.
ದೆಹಲಿಯ ಎಎಪಿ ಸರ್ಕಾರದ ವಿರುದ್ಧ ಎಲ್ಲಾ ದೇಶವಿರೋಧಿ ಶಕ್ತಿಗಳು ಒಗ್ಗೂಡಿವೆ. ನಮ್ಮದು ಅತ್ಯಂತ ಜನಪ್ರಿಯ ಸರ್ಕಾರ. ಈ ಶಕ್ತಿಗಳು ನಮ್ಮನ್ನು ಒಡೆಯಲು ಬಯಸುತ್ತವೆ ಆದರೆ ನಮ್ಮ ಎಲ್ಲಾ ಶಾಸಕರು ಒಟ್ಟಿಗೆ ಇದ್ದಾರೆ ಎಂದು ಕೇಜ್ರಿವಾಲ್ ಹೇಳಿದರು.
ಬಿಜೆಪಿ ಇದುವರೆಗೆ 277 ಶಾಸಕರನ್ನು ಖರೀದಿಸಿದೆ ಎಂದು ಎಎಪಿ ಮುಖ್ಯಸ್ಥ ಹೇಳಿದರು. ಕೇಸರಿ ಪಾಳಯವು ಜಿಎಸ್‌ಟಿ ಮತ್ತು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಮೂಲಕ ಸಂಗ್ರಹಿಸಿದ ಹಣವನ್ನು ಶಾಸಕರನ್ನು ಬೇಟೆಯಾಡಲು ಬಳಸಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.