ಚಿತ್ರದುರ್ಗ,(ಆಗಸ್ಟ್ 23): ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ, ಡಾ.ಬಿ.ಆರ್.ಅಂಬೇಡ್ಕರ್, ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗಳ ಪ್ರಸಕ್ತ ಸಾಲಿನ 6ನೇ ತರಗತಿ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕಂಪ್ಯೂಟರೈಸ್ಡ್ ಆಟೋ ಸೆಲೆಕ್ಷನ್ ಮುಖಾಂತರ 3 ಸುತ್ತುಗಳ ದಾಖಲಾತಿ ಮುಕ್ತಾಯವಾಗಿದ್ದು, ಖಾಲಿ ಉಳಿದಿರುವ ಸೀಟುಗಳಿಗೆ ಪ್ರವೇಶ ಪರೀಕ್ಷೆಯ ಮೆರಿಟ್ ಹಾಗೂ ಮೀಸಲಾತಿ ಅನುಸಾರ ಸರ್ಕಾರದ ಮಾರ್ಗಸೂಚಿಯಂತೆ 4ನೇ ಸುತ್ತಿನ ಆಯ್ಕೆ ಪಟ್ಟಿ ಪ್ರಕಟಿಸಿದೆ.
ಈ ಪಟ್ಟಿಯಲ್ಲಿರುವ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡಲು ಕೌನ್ಸಿಲಿಂಗ್ ಕಾರ್ಯಕ್ರಮವನ್ನು ಇದೇ ಆಗಸ್ಟ್ 25ರಂದು ಬೆಳಗ್ಗೆ 10 ಗಂಟೆಗೆ ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಎದುರು, ಕ್ರೀಡಾ ಭವನದಲ್ಲಿ ಆಯೋಜಿಸಲಾಗಿದೆ.
ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಈಗಾಗಲೇ ದೂರವಾಣಿ ಮುಖಾಂತರ ಮಾಹಿತಿ ನೀಡಿದ್ದು, ಅಂತಹ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಕೌನ್ಸಿಲಿಂಗ್‍ಗೆ ಹಾಜರಾಗಲು ಸೂಚಿಸಿದೆ. 4ನೇ ಆಯ್ಕೆ ಪಟ್ಟಿಯಲ್ಲಿ ಇಲ್ಲದ ವಿದ್ಯಾರ್ಥಿಗಳು ಕೌನ್ಸಿಲಿಂಗ್ ಹಾಜರಾಗುವ ಅವಶ್ಯಕತೆ ಇರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಪೋಷಕರು ತಮಗೆ ಸಮೀಪವಿರುವ ವಸತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.