ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಪಕ್ಷಗಳ ಒಗ್ಗಟ್ಟಿಗೆ ದೊಡ್ಡ ಹಿನ್ನಡೆಯಾಗಿ, ವಿರೋಧ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಕರೆದಿರುವ ಸಭೆಗೆ ಹೋಗದಿರಲು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನಿರ್ಧರಿಸಿದ್ದಾರೆ. ಮಮತಾ ಬ್ಯಾನರ್ಜಿ ಬದಲಿಗೆ, ಅವರ ಸೋದರಳಿಯ ಮತ್ತು ಹಿರಿಯ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ದೆಹಲಿಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನು ತೃಣಮೂಲ ಮೂಲಗಳು ವರದಿ ಮಾಡಿವೆ.
ಮಂಗಳವಾರ ನಡೆಯುವ ಸಭೆಗೆ ವಿರೋಧ ಪಕ್ಷಗಳ ನಾಯಕರಿಗೆ ಇ-ಮೇಲ್ ಮೂಲಕ ಪವಾರ್ ಆಹ್ವಾನ ಮಾಡಿದ್ದಾರೆ. ಆದರೆ ಆ ಪತ್ರದಲ್ಲಿ ಪವಾರ್ ಹೇಳಿಕೆ ತೃಣಮೂಲದ ಉನ್ನತ ನಾಯಕತ್ವಕ್ಕೆ ನೋವುಂಟು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಯಾಕೆಂದರೆ ಇದಕ್ಕೂ ಮುನ್ನ ಮಮತಾ ಅವರು ಸಭೆಗೆ ಆಹ್ವಾನಿಸಿ ಎಲ್ಲರಿಗೂ ಪತ್ರ ಬರೆದಿದ್ದರು. ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಜೂನ್ 15 ರಂದು ದೆಹಲಿಯಲ್ಲಿ ಬ್ಯಾನರ್ಜಿ ಕರೆದ ಮೊದಲ ಸಭೆಯಲ್ಲಿ, “ದೇಶದ ಪ್ರಜಾಪ್ರಭುತ್ವದ ನೀತಿಯನ್ನು ಎತ್ತಿಹಿಡಿಯುವ” ಸಾಮಾನ್ಯ ಅಭ್ಯರ್ಥಿಯನ್ನು ಪ್ರತಿಪಕ್ಷವಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದರು.
ಕಾಂಗ್ರೆಸ್, ಸಮಾಜವಾದಿ ಪಕ್ಷ, ಎನ್‌ಸಿಪಿ, ಡಿಎಂಕೆ, ಆರ್‌ಜೆಡಿ ಮತ್ತು ಎಡಪಕ್ಷಗಳ ನಾಯಕರು ಎರಡು ಗಂಟೆಗಳ ಕಾಲ ತೃಣಮೂಲ ಕಾಂಗ್ರೆಸ್ ವರಿಷ್ಠರು ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದರು, ಆದರೆ ಎಎಪಿ, ಎಸ್‌ಎಡಿ, ಎಐಎಂಐಎಂ, ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ಒಡಿಶಾದ ಆಡಳಿತಾರೂಢ ಬಿಜೆಡಿ ಇದನ್ನು ಬಿಟ್ಟುಬಿಟ್ಟಿವೆ. ಶಿವಸೇನೆ, ಸಿಪಿಐ, ಸಿಪಿಐ(ಎಂ), ಸಿಪಿಐ(ಎಂಎಲ್), ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಜೆಡಿ(ಎಸ್), ಆರ್‌ಎಸ್‌ಪಿ, ಐಯುಎಂಎಲ್, ಆರ್‌ಎಲ್‌ಡಿ ಮತ್ತು ಜೆಎಂಎಂ ನಾಯಕರು ಉಪಸ್ಥಿತರಿದ್ದರು.
ಪವಾರ್ ಅವರ ನಾಲ್ಕು ವಾಕ್ಯಗಳ ಪತ್ರದಲ್ಲಿ ಹಿಂದಿನ ಸಭೆಯ ಉಲ್ಲೇಖವಿಲ್ಲ. ಹಾಗಾಗಿ ಆ ಸಭೆಗೆ ಹೋಗದಿರಲು ಮಮತಾ ನಿರ್ಧರಿಸಿದ್ದಾರೆ ಎನ್ನಲಾಗಿದೆ.