ಬೆಂಗಳೂರು: ಸದ್ಯ ಕೇಂದ್ರ ಸರ್ಕಾರದಿಂದ ವಾಹನ ಸವಾರರಿಗೆ ನಿನ್ನೆ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಅದೇನೆಂದರೆ ಪೆಟ್ರೋಲ್ ಡಿಸೇಲ್ ದರದಲ್ಲಿ ದರ ಇಳಿಕೆ ಮಾಡಲಾಗಿದೆ. ಕೊಂಚ ಖುಷಿ ಕೊಟ್ಟಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಅಧಿಕಾರದಲ್ಲಿರುವವರಿಗೆ ಅತಿ ಜಾಣತನ ಒಳ್ಳೆಯದ್ದಲ್ಲ ಎಂದಿದ್ದಾರೆ.
ಜನಾಕ್ರೋಶಕ್ಕೆ ಕೊನೆಗೂ ಮಣಿದಿರುವ ಕೇಂದ್ರ ಸರಕಾರವು ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದೆ. ಹೀಗಾಗಿ ತೈಲ ಬೆಲೆಗಳು ದೇಶಾದ್ಯಂತ ಕಡಿಮೆಯಾಗುತ್ತಿವೆ. ಆದರೆ, ಕರ್ನಾಟಕದಲ್ಲಿ ಬಿಜೆಪಿಯದ್ದೇ ಸರಕಾರ ಸುಂಕ ಕಡಿತಕ್ಕೆ ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ.
ನೆರೆಯ ಕೇರಳದಲ್ಲಿ ಈಗಾಗಲೇ ಸುಂಕ ಕಡಿತ ಮಾಡಲಾಗಿದೆ. ಆದರೆ, ರಾಜ್ಯ ಬಿಜೆಪಿ ಸರಕಾರವು ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಎನ್ನುವ ವ್ಯಾಪಾರಿ ಬುದ್ಧಿಯ ಜಾಣ ನಡೆ ಅನುಸರಿಸುತ್ತಿದೆ. ತೆರಿಗೆ ಕಡಿತದ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಸಿಎಂ @BSBommai ಅವರು ಹೇಳಿರುವುದು ಒಪ್ಪುವ ಮಾತಲ್ಲ.
ಅಧಿಕಾರದಲ್ಲಿ ಇರುವವರಿಗೆ ಅತಿ ಜಾಣತನ ಒಳ್ಳೆಯದಲ್ಲ. ಕೋವಿಡ್, ಸತತ ಬೆಲೆ ಏರಿಕೆಯಿಂದ ಹೈರಾಣ ಆಗಿರುವ ಜನರ ತಾಳ್ಮೆ ಪರೀಕ್ಷೆ ಮಾಡುವುದು ಒಳ್ಳೆಯದಲ್ಲ. ಕೂಡಲೇ ಸುಂಕ ಕಡಿತ ಮಾಡಿ ತೈಲ ಬೆಲೆ ಪ್ರಹಾರದಿಂದ ಬಸವಳಿದಿರುವ ಜನರಿಗೆ ನೆರವಾಗಬೇಕು ಎನ್ನುವುದು ನನ್ನ ಆಗ್ರಹವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.