ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ಏ.08) : ಮನುವಾದಿಗಳ ವಿರುದ್ದ ಹೋರಾಡಿ ಸಂವಿಧಾನವನ್ನು ರಕ್ಷಿಸಬೇಕಾಗಿರುವುದು ನಮ್ಮ ಮುಂದಿರುವ ದೊಡ್ಡ ಸವಾಲು. ಅದಕ್ಕಾಗಿ ಸಲಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದನ್ನು ಗಂಭೀರವಾಗಿ ತೆಗೆದುಕೊಳ್ಳಿ ಎಂದು ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಸಂವಿಧಾನಿಕ ಸದೃಢ ಭಾರತದ ಸಂಕಲ್ಪಕ್ಕಾಗಿ ಮಾನವ ಬಂಧುತ್ವ ವೇದಿಕೆ ಕರ್ನಾಟಕ ವತಿಯಿಂದ ತ.ರಾ.ಸು.ರಂಗಮಂದಿರದಲ್ಲಿ ಶುಕ್ರವಾರ ನಡೆದ ರಾಜ್ಯ ಬಂಧುತ್ವ ಅಧಿವೇಶನ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾನವ ಬಂಧುತ್ವ ವೇದಿಕೆಯನ್ನು ರಚಿಸಿ ಎಂಟು ವರ್ಷಗಳಾಗಿದೆ. ಅಂದಿನಿಂದ ಇಲ್ಲಿಯವರೆಗೂ ಬುದ್ದ, ಬಸವ, ಅಂಬೇಡ್ಕರ್, ಪೆರಿಯಾರ್, ಸಾವಿತ್ರಿಬಾಯಿ ಪುಲೆ ಸೇರಿದಂತೆ ಅನೇಕ ಮಹಾನ್ ನಾಯಕರುಗಳ ಇತಿಹಾಸವನ್ನು ತಿಳಿಸುವುದರ ಜೊತೆ ಮೂಢನಂಬಿಕೆ ವಿರುದ್ದ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ.
ದೇಶಕ್ಕೆ ಅನ್ನ ನೀಡುವ ರೈತರ ಸಮಸ್ಯೆ, ನಿರುದ್ಯೋಗ ಸಮಸ್ಯೆ, ಜಾತಿವಾದ, ಕೋಮುವಾದಗಳ ವಿರುದ್ದ ಚರ್ಚಿಸಿ ವೇದಿಕೆಯನ್ನು ಗಟ್ಟಿಗೊಳಿಸುವ ಉದ್ದೇಶ ನಮ್ಮದು. ಮಾಂಸ ಹೇಗೆ ತಿನ್ನಬೇಕು ಎನ್ನುವುದನ್ನು ಸಸ್ಯಾಹಾರಿಗಳು ಹೇಳಿಕೊಡುವಂತಾಗಿರುವುದು ವಿಪರ್ಯಾಸ.
ಹಲಾಲ್, ಜಟ್ಕ ಕಟ್ ಇವುಗಳ ಗೊಂದಲಕ್ಕೆ ಯಾರು ತಲೆಕೆಡಿಸಿಕೊಳ್ಳುವುದು ಬೇಡ. ಇಂತಹ ಸನ್ನಿವೇಶದಲಿಹೋರಾಟದ ಮೂಲಕ ನಿಮ್ಮ ಬದುಕನ್ನು ನೀವುಗಳೇ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಧರ್ಮ ಜಾತಿ ಅಪೀಮು ಇದ್ದಂತೆ. ಎದುರಾಳಿಗಳನ್ನು ನಿಯಂತ್ರಿಸಿ ಸಮಾಜವನ್ನು ರಕ್ಷಿಸಬೇಕಾಗಿರುವುದರಿಂದ ಮಾನವ ಬಂಧುತ್ವ ವೇದಿಕೆಯಿಂದ ಪಡೆಗಳನ್ನು ಕಟ್ಟಬೇಕಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಸವಲತ್ತುಗಳನ್ನು ಒಂದೊಂದಾಗಿ ಕಸಿದುಕೊಳ್ಳುತ್ತಿದೆ. ಆದರೂ ಯಾರು ವಿರೋಧಿಸುತ್ತಿಲ್ಲ. ಶೇ.7.5 ಮೀಸಲಾತಿಗಾಗಿ ನಮ್ಮ ಸಮಾಜದ ಸ್ವಾಮೀಜಿ ಬೆಂಗಳೂರಿನಲ್ಲಿ ಹೋರಾಟ ನಡೆಸುತ್ತಿದ್ದಾರೆ.
ಪ್ರತಿ ರಾಜ್ಯ ಜಿಲ್ಲೆಯಲ್ಲಿ ದಲಿತರ ಕೊಲೆಗಳಾಗುತ್ತಿದೆ. ದೇಶ ಗಂಭೀರ ಪರಿಸ್ಥಿತಿಯಲ್ಲಿರುವುದರಿಂದ ಹಿರಿಯರ ಇತಿಹಾಸ ತಿಳಿಸುವ ಪ್ರಯತ್ನ ನಮ್ಮದು. ಸಂವಿಧಾನ ಬದಲಾಯಿಸುತ್ತೇವೆ ಎನ್ನುವವರ ವಿರುದ್ದ ಹೋರಾಡಬೇಕು. ಹತ್ತು ರೂಪಾಯಿ ಪಂಚಾಂಗ ಇಲ್ಲಿಯವರೆಗೂ ನಮ್ಮನ್ನು ದಿಕ್ಕು ತಪ್ಪಿಸುತ್ತಿದೆ. ರಾಜಕೀಯ ಭಾಷಣದಿಂದ ಯಾವ ಪ್ರಯೋಜನವಿಲ್ಲ.
ಎರಡು ದಿನಗಳ ಕಾಲ ಇಲ್ಲಿ ನಡೆಯುವ ವಿಚಾರಗೋಷ್ಟಿಗಳಲ್ಲಿ ವಿಚಾರವಾದಿಗಳು, ಬುದ್ದಿಜೀವಿಗಳು ಹೇಳುವ ವಿಷಯಗಳನ್ನು ಗಮನಕೊಟ್ಟು ಕೇಳಿ ಎಂದು ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರುಗಳಲ್ಲಿ ವಿನಂತಿಸಿದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಸಂಸ್ಕøತಿ ಚಿಂತಕ ಬರಹಗಾರ ಪುರುಷೋತ್ತಮ ಬಿಳಿಮಲೆ, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರನಾಯ್ಕರ್, ನ್ಯಾಯವಾದಿ ಎನ್.ಆನಂದನಾಯ್ಕ ವೇದಿಕೆಯಲ್ಲಿದ್ದರು.