ಚಿತ್ರದುರ್ಗ : ಉಕ್ರೇನ್ ಮೇಲೆ ರಷ್ಯಾ ಯುದ್ದ ಸಾರಿ ವಾರ ಕಳೆದಿದೆ. ಆದ್ರೆ ಪರಿಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚು ಬಿಗಡಾಯಿಸುತ್ತಿದೆ. ಅಲ್ಲಿ ನೆಲೆಸಿರುವ ಭಾರತೀಯ ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಯ್ನಾಡಿಗೆ ಬರಲು ಕಷ್ಟಪಡುತ್ತಿದ್ದಾರೆ. ಇಂಥ ಪಜೀತಿಯಲ್ಲೂ ಜಿಲ್ಲೆಯ ಹಿರಿಯೂರಿನ ಶಕ್ತಿಶ್ರೀ ಎಂಬ ವಿದ್ಯಾರ್ಥಿನಿ ಸುರಕ್ಷಿತವಾಗಿ ತಲುಪಿದ್ದಾರೆ.
ಶ್ರೀಶಕ್ತಿ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಕಳೆದ ಡಿಸೆಂಬರ್ ತಿಂಗಳಲ್ಲಿ ಅಲ್ಲಿಗೆ ಹೋಗಿದ್ದರು. ಉಕ್ರೇನ್ ದೇಶದ ಝಪೋರಿಝಿಯಾ ರಾಜ್ಯದ ಚರ್ನವೀಕ್ಷಿಗೆ ಉನ್ನತ ವ್ಯಾಸಾಂಗಕ್ಕೆ ತೆರಳಿದ್ದರು. ಪ್ರಸ್ತುತ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ದ ನಡೆಯುತ್ತಿದೆ. ಹೀಗಾಗಿ ಅಲ್ಲಿನ ವಿದ್ಯಾರ್ಥಿಗಳು ತವರಿಗೆ ಮರಳುವ ಆತಂಕದಲ್ಲಿದ್ದಾರೆ. ಅದರಲ್ಲಿ ವಿದ್ಯಾರ್ಥಿನಿ ಶಕ್ತಿಶ್ರೀ ಸೇರಿದಂತೆ ಹಲವರು ವಿದ್ಯಾರ್ಥಿಗಳು ರಾಜ್ಯಕ್ಕೆ ಮರಳಿದ್ದಾರೆ.
ರೊಮೋನಿಯ ಗಡಿಯಿಂದ ದೆಹಲಿ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೋಮವಾರ ರಾತ್ರಿ 8 ಸಮಯಕ್ಕೆ ವಿಮಾನ ನಿಲ್ದಾಣದ ಮೂಲಕ ಬಂದು ಮಧ್ಯರಾತ್ರಿ 2 ಗಂಟೆಗೆ ಹಿರಿಯೂರಿನ ತಮ್ಮ ನಿವಾಸಕ್ಕೆ ವಾಪಸ್ ಆಗಿದರು.
ಉಕ್ರೇನ್ ನಲ್ಲಿ ಯುದ್ಧ ಪ್ರಾರಂಭವಾದ ಹಿನ್ನೆಲೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ಊಟ, ನೀರಿಗಾಗಿ ಪರದಾಟ ನಡೆಸಿದ್ದರು. ಶಕ್ತಿಶ್ರೀ ಸಹ ಊಟ, ನೀರು ಇಲ್ಲದೆ ಸತತ 20 ಗಂಟೆ ಕಾಲ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದರು. ಪ್ರಯಾಣ ಮಾಡುವ ಸಂದರ್ಭದಲ್ಲಿ ಊಟ, ನೀರು ಸಿಗಲಿಲ್ಲ. ಕೇವಲ ಒಂದೇ ಒಂದು ತಂಪು ಪಾನೀಯವೇ ಸಧ್ಯಕ್ಕೆ ಜೀವಕ್ಕೆ ಔಷಧಿಯಾಗಿ ಜೀವವನ್ನು ಉಳಿಸಿತು ಎಂದು ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.
ಅಲ್ಲಿನ ವಾತಾವರಣ ತುಂಬಾ ಕಠಿಣವಾಗಿತ್ತು. ಎಲ್ಲಿ ನೋಡಿದರೂ ಅಲ್ಲಿ ಗುಂಡಿನ ಸದ್ದು ಕೇಳುತ್ತಿದ್ದವು. ಜೊತೆಗೆ 48 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಸಂಕಷ್ಟ ಅನುಭವಿಸಿ ಬಂದಿದ್ದೇವೆ. ನಮಗೆ ಸಹಕಾರ ನೀಡಿದ ಕೇಂದ್ರ ಹಾಗೂ ರಾಜ್ಯ ಸರ್ಕಾರ, ಮಾಧ್ಯಮಗಳು ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ ವಿದ್ಯಾರ್ಥಿನಿ ಶಕ್ತಿಶ್ರೀ.