Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪಿಂಚಣಿ ಹಣಕ್ಕಾಗಿ ವೃದ್ಧ ಅತ್ತೆಯನ್ನು ಬೆನ್ನ ಮೇಲೆ ಹೊತ್ತು 9 ಕಿ.ಮೀ ನಡೆದ ಸೊಸೆ: ಕರುಣಾಜನಕ ಕಥೆ!

---Advertisement---

ಸುದ್ದಿಒನ್,ರಾಯ್ಪುರ,ಮೇ.24: ಸುಡು ಬಿಸಿಲು, ಕಲ್ಲು-ಮುಳ್ಳುಗಳಿಂದ ತುಂಬಿದ ಅರಣ್ಯದ ಹಾದಿ, ಮಧ್ಯೆ ಸಿಗುವ ಹಳ್ಳ-ಕೊಳ್ಳಗಳು… ಇವೆಲ್ಲವನ್ನೂ ಲೆಕ್ಕಿಸದೆ ಮಹಿಳೆಯೊಬ್ಬರು ತಮ್ಮ 90 ವರ್ಷದ ವೃದ್ಧ ಅತ್ತೆಯನ್ನು ಬೆನ್ನ ಮೇಲೆ ಹೊತ್ತುಕೊಂಡು ಮೈಲುಗಟ್ಟಲೆ ಸಾಗುತ್ತಿದ್ದಾರೆ. ವಿಕ್ರಮ್-ಬೇತಾಳನ ಕಥೆಯನ್ನು ನೆನಪಿಸುವಂತಿರುವ ಈ ದೃಶ್ಯ ಯಾವುದೇ ಸಿನಿಮಾದ್ದಲ್ಲ, ಬದಲಿಗೆ ಕೇವಲ 1,500 ರೂಪಾಯಿ ಪಿಂಚಣಿ ಹಣಕ್ಕಾಗಿ ಹಣ್ಣಣ್ಣಾದ ವೃದ್ಧೆಯನ್ನು ಕರೆದುಕೊಂಡು ಬ್ಯಾಂಕಿಗೆ ಹೊರಟಿರುವ ಸೊಸೆಯೊಬ್ಬಳ ನೈಜ ಹೋರಾಟದ ಕರುಣಾಜನಕ ಚಿತ್ರಣ!

ಡಿಜಿಟಲ್ ಇಂಡಿಯಾ ಮತ್ತು ಮನೆಬಾಗಿಲಿಗೆ ಸೇವೆ ಎಂಬ ದೊಡ್ಡ ದೊಡ್ಡ ಘೋಷಣೆಗಳ ನಡುವೆಯೂ, ಗ್ರಾಮೀಣ ಭಾರತದ ಕಟ್ಟಕಡೆಯ ಜನರಿಗೆ ಮೂಲಭೂತ ಸೌಲಭ್ಯಗಳು ಎಷ್ಟು ದೂರವಿವೆ ಎಂಬುದಕ್ಕೆ ಛತ್ತೀಸ್ಗಢದ ಸುರ್ಗುಜಾ ಜಿಲ್ಲೆಯ ಮೈನ್ಪಾಟ್ ಪ್ರದೇಶದಿಂದ ಬಂದಿರುವ ಈ ವಿಡಿಯೋ ಸಾಕ್ಷಿಯಾಗಿದೆ.

9 ಕಿಲೋಮೀಟರ್ ಕಠಿಣ ಪ್ರಯಾಣ

ಸ್ಥಳೀಯ ಮೂಲಗಳ ಪ್ರಕಾರ, ಸುಖ್ಮೇನಿಯಾ ಬಾಯಿ ಎಂಬ ಮಹಿಳೆ ತನ್ನ 90 ವರ್ಷದ ವಯೋವೃದ್ಧ ಅತ್ತೆಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಬರೊಬ್ಬರಿ 9 ಕಿಲೋಮೀಟರ್ ನಡೆದಿದ್ದಾರೆ. ಈ ದುರ್ಗಮ ಕಾಡಿನ ಹಾದಿಯಲ್ಲಿ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ, ಹಳ್ಳಗಳನ್ನು ದಾಟುತ್ತಾ, ಕಲ್ಲು ಹಾದಿಯಲ್ಲಿ ಹೆಜ್ಜೆ ಇಡುತ್ತಾ ಬ್ಯಾಂಕ್ ತಲುಪಬೇಕಾದ ಅನಿವಾರ್ಯತೆ ಈ ಕುಟುಂಬಕ್ಕಿದೆ.

ಸರ್ಕಾರದ ನಿಯಮಗಳ ಪ್ರಕಾರ ಪಿಂಚಣಿ ಹಣ ಬಿಡುಗಡೆಯಾಗಬೇಕಾದರೆ ಫಲಾನುಭವಿಗಳು ಬ್ಯಾಂಕಿಗೆ ಖುದ್ದಾಗಿ ಹಾಜರಾಗಬೇಕು. ಬ್ಯಾಂಕಿನಲ್ಲಿ ಹೆಬ್ಬೆರಳಿನ ಗುರುತು (ಬಯೋಮೆಟ್ರಿಕ್) ಅಥವಾ ಗುರುತಿನ ಪರಿಶೀಲನೆ ಕಡ್ಡಾಯವಾಗಿರುವುದರಿಂದ, ನಡೆಯಲು ಸಾಧ್ಯವೇ ಇಲ್ಲದ ವೃದ್ಧೆಯನ್ನು ಸೊಸೆ ಈ ರೀತಿ ಹೊತ್ತುಕೊಂಡು ಬರಬೇಕಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಈ ಕುಟುಂಬ ಇದೇ ರೀತಿ ಪರದಾಡುತ್ತಿದೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಸಂಭಾಷಣೆ

ವೈರಲ್ ಆಗಿರುವ ವಿಡಿಯೋದಲ್ಲಿ ದಾರಿಹೋಕರೊಬ್ಬರು ಆ ಮಹಿಳೆಯನ್ನು ಮಾತನಾಡಿಸಿ, “ಇಷ್ಟು ದೂರ ಏಕೆ ಹೊತ್ತುಕೊಂಡು ಹೋಗುತ್ತಿದ್ದೀರಾ?” ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಸುಖ್ಮೇನಿಯಾ ಬಾಯಿ, “ಅತ್ತೆಯನ್ನು ಖುದ್ದಾಗಿ ಬ್ಯಾಂಕಿಗೆ ಕರೆದುಕೊಂಡು ಹೋದರೆ ಮಾತ್ರ ಪಿಂಚಣಿ ಹಣ ಸಿಗುತ್ತದೆ. ನಮ್ಮೂರಿಗೆ ಬಸ್ ಅಥವಾ ಯಾವುದೇ ವಾಹನದ ಸೌಕರ್ಯವಿಲ್ಲ. ಕಾಡಿನ ದಾರಿಯಲ್ಲಿ ಹಳ್ಳಗಳನ್ನು ದಾಟಿಕೊಂಡು ಹೋಗಬೇಕು. 3-4 ತಿಂಗಳಿಗೊಮ್ಮೆ ಒಟ್ಟಿಗೆ ಸಿಗುವ ಸುಮಾರು 1,500 ರೂಪಾಯಿ ಪಿಂಚಣಿ ಹಣಕ್ಕಾಗಿ ಈ ಕಷ್ಟ ಪಡಲೇಬೇಕಾಗಿದೆ,” ಎಂದು ಅಳಲು ತೋಡಿಕೊಂಡಿದ್ದಾರೆ.

ಹಿಂದೆಲ್ಲಾ ಪಿಂಚಣಿ ಹಣವನ್ನು ಸ್ಥಳೀಯವಾಗಿಯೇ ತಲುಪಿಸುವ ವ್ಯವಸ್ಥೆ ಇತ್ತು, ಆದರೆ ಈಗ ಅದು ನಿಂತುಹೋಗಿರುವುದರಿಂದ ಈ ರೀತಿ ಕಷ್ಟಪಡುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಹಾಸಿಗೆ ಹಿಡಿದಿರುವ ಮತ್ತು ಅತಿ ವೃದ್ಧ ವಯಸ್ಕರಿಗೆ ತಂತ್ರಜ್ಞಾನದ ಯುಗದಲ್ಲೂ ಮನೆ ಬಾಗಿಲಿಗೆ ಪಿಂಚಣಿ ತಲುಪಿಸಲು ಸಾಧ್ಯವಿಲ್ಲವೇ?” ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ತಂತ್ರಜ್ಞಾನ ಮತ್ತು ನೀತಿ ನಿಯಮಗಳು ಜನರ ಸುಲಭ ಜೀವನಕ್ಕಾಗಿ ಇರಬೇಕೇ ಹೊರತು, ಹೀಗೆ ಜೀವ ಹಿಂಡುವುದಕ್ಕಲ್ಲ ಎಂಬ ಆಕ್ರೋಶದ ಮಾತುಗಳು ಕೇಳಿಬರುತ್ತಿವೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now