ಭದ್ರಾ ಮೇಲ್ಡಂಡೆ ಯೋಜನೆಗೆ ಕೇಂದ್ರ ಸರ್ಕಾರದಿಂದ 13 ಸಾವಿರ ಕೋಟಿ ಹಣ ಮಂಜೂರು‌ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

suddionenews
5 Min Read

 

 

ಚಿತ್ರದುರ್ಗ, ಜೂ.04:  ಪ್ರಧಾನ ಮಂತ್ರಿಗಳು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಭದ್ರಾ ಮೇಲ್ಡಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲಿದ್ದಾರೆ. ಯೋಜನೆಗೆ ಕೇಂದ್ರ ಸರ್ಕಾರ 13 ಸಾವಿರ ಕೋಟಿ ಹಣ ಮಂಜೂರು ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹಿರಿಯೂರು ತಾಲ್ಲೂಕಿನ ಹರಿಯಬ್ಬೆ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದ ಹೆಚ್.ಎಲ್.ಗುಣ್ಣಯ್ಯ ವೇದಿಕೆಯಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಣ್ಣ ನೀರಾವರಿ ಇಲಾಖೆ, ಹಿರಿಯೂರು ತಾಲ್ಲೂಕು ಆಡಳಿತ ಇವರ ಸಂಯುಕ್ತಾಶ್ರಯದಲ್ಲಿ ಹಿರಿಯೂರು ವಿಧಾನಸಭಾ ಕ್ಷೇತ್ರ ಧರ್ಮಪುರ ಕೆರೆ ಹಾಗೂ ಇತರೆ ಏಳು ಕೆರೆಗಳಿಗೆ ನೀರುಣಿಸುವ ಏತ ನೀರಾವರಿ ಯೋಜನೆಯ ಭೂಮಿಪೂಜೆ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ರಾಜ್ಯ ಸರ್ಕಾರದಿಂದ ಪೂರಕ ದಾಖಲೆ ಹಾಗೂ ಬೇಡಿಕೆಗಳನ್ನು ಸಲ್ಲಿಸಲಾಗಿದೆ. ಯೋಜನೆಯ ಜಾರಿಗಾಗಿ ಈ ಭಾಗದ ಜನರು 50 ವರ್ಷಗಳ ಸುಧೀರ್ಘ ಹೋರಾಟ ನೆಡೆಸಿದ್ದಾರೆ. 2008ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಸರ್ಕಾರದಿಂದ ಅನುಮೋದನೆ ನೀಡಿದರು.

ಯೋಜನೆ ಜಾರಿಗೆ 543 ದಿನಗಳ ಕಾಲ ಈ ಭಾಗದ ಜನರು ಧರಣಿ ಮಾಡಿದ್ದರು. ಈ ಹೋರಾಟದಲ್ಲಿ ಹೆಣ್ಣುಮಕ್ಕಳು ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿದ್ದರು. ಅಂದಿನ ಸರ್ಕಾರದ ನೀರಾವರಿ ಖಾತೆ ಸಚಿವನಾಗಿ, ಹೋರಾಟಗಾರ ಬಳಿ ಬಂದು ಯೋಜನೆ ಜಾರಿಗೆ ಬಗ್ಗೆ ತಾಂತ್ರಿಕವಾಗಿ ಹೇಗೆ ಭದ್ರಾ ನದಿಯಿಂದ ನೀರು ತರಲಾಗುತ್ತದೆ ಎಂದು ವಿವರಿಸಿದ ಮೇಲೆ ಹೋರಾಟ ಅಂತ್ಯವಾಯಿತು.

ಹೋರಾಟಗಾರರಿಗೆ ಆಶ್ವಾಸನೆ ನೀಡಿದ ಹಾಗೇ ಕೇಂದ್ರ ಸರ್ಕಾರದ ಪರಿಸರ ಹಾಗೂ ಅರಣ್ಯ ಇಲಾಖೆಯ ಅನುಮತಿ ಪಡೆದು 15 ದಿನದಲ್ಲಿ ಯೋಜನೆಯ ಟೆಂಡರ್ ಕರೆಯಲಾಯಿತು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.

ರೈತರ ಬೆವರಿಗೆ ಗಂಗೆಯ ಹನಿ ಸೇರಿದರೆ ಭೂಮಿ ತಾಯಿ ಬಂಗಾರದ ಬೆಳೆ ಕೊಡುತ್ತಾಳೆ. ಮಧ್ಯ ಕರ್ನಾಟಕದ ಪ್ರಮುಖ ಎರೆಡು ಯೋಜನೆಗಳಾದ
ಭದ್ರ ಮೇಲ್ದಂಡೆ ಹಾಗೂ ಎತ್ತಿನ ಹೊಳೆ ಯೋಜನೆನ್ನು ಪ್ರಾರಂಭ ಮಾಡುವ ಯೋಗ ನನ್ನದಾಗಿದೆ. ಹಿರಿಯೂರು ಭಾಗದ ರೈತರು ಶ್ರಮ ಜೀವಿಗಳು. ನೀರಾವರಿ ಸೌಲಭ್ಯ ಇಲ್ಲದಿದ್ದಾಗಲೂ ತೋಟಗಾರಿಕೆ ಮಾಡಿದ್ದೀರಿ. ಶ್ರಮ ಜೀವಿಗಳ ನಾಡಿಗೆ, ಈ ಭಾಗದ ರೈತರ ಬೆವರು ಹಾಗೂ ಶ್ರಮಕ್ಕೆ ನನ್ನ ಸಾಷ್ಟಾಂಗ ನಮಸ್ಕಾರ.

ಧರ್ಮಪುರ ಸೇರಿದಂತೆ ಏಳು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 90 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. 40 ಕೋಟಿ ವೆಚ್ಚದ ಮೊದಲೇ ಹಂತದ ಕಾಮಗಾರಿಗೆ ಅಡಿಗಲ್ಲು ಹಾಕಲಾಗಿದೆ. ಉಳಿದ ಎರಡನೇ ಹಂತದ 50 ಕೋಟಿ ಕಾಮಗಾರಿಗೆ ತಿಂಗಳ ಒಳಗಾಗಿ ಟೆಂಡರ್ ಕರೆಯಲಾಗುವುದು. ಯೋಜನೆಯಲ್ಲಿ ಬಿಟ್ಟುಹೋದ ಹರಿಯಬ್ಬೆ ಸೇರಿದಂತೆ ಇತರೆ ಕೆರೆಗಳನ್ನು ಸೇರಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಮನೆ ಮನೆಗೆ ಗಂಗೆ ಯೋಜನೆಯಡಿ ಚಿತ್ರದುರ್ಗದ ತಾಲೂಕಿನ 171 ಹಳ್ಳಿಗೆ ಹಾಗೂ ಹಿರಿಯೂರು ತಾಲೂಕಿನ 131 ಹಳ್ಳಿಗೆ ಬಹುಗ್ರಾಮ ಯೋಜನೆ ಮಂಜೂರು ಮಾಡಲಾಗಿದೆ.ದಾಳಂಬಿ ಹಾಗೂ ಇತರೆ ತೋಟಗಾರಿಕೆ ಬೆಳೆಗಳ ವಿಮೆ ಮಂಜೂರು ಮಾಡಲಾಗುವುದು‌. ಜನಪರ ಸರ್ಕಾರದಲ್ಲಿ ಜನರು ಸರ್ಕಾರದ ಯೋಜನೆಗಳಲ್ಲಿ ಪಾಲ್ಗೊಳ್ಳಬೇಕು. 21 ನೇ ಶತಮಾನ ಜ್ಞಾನದ ಶತಮಾನ. ದುಡಿಮೇ ದೊಡ್ಡಪ್ಪವಾಗಿದೆ.

ಸರ್ಕಾರದಲ್ಲಿ ವಿದ್ಯೆಗೆ ಬಹಳ ಮಹತ್ವ ನೀಡಲಾಗಿದೆ.‌7000 ಸಾವಿರ ಶಾಲಾ ಕೊಠಡಿಗಳ ನಿರ್ಮಾಣ, ಶಾಲೆಗಳ ಪುನರಾಂಭ ಮಾಡಿ ಸ್ಮಾರ್ಟ್ ಕ್ಲಾಸ್ ನೀಡಲಾಗುತ್ತಿದೆ. ಆರೋಗ್ಯ ದೃಷ್ಟಿಯಿಂದ ರಾಜ್ಯದ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಸರ್ಕಾರದಿಂದ ಸಂಪೂರ್ಣ ಉಚಿತ ಆರೋಗ್ಯ ಕ್ಯಾಂಪ್ ಮಾಡಲಾಗುವುದು. ಉಚಿತ ಕಣ್ಣಿನ ಹಾಗೂ ಕಿವಿ ಸಮಸ್ಯೆ ಚಿಕಿತ್ಸೆ ನೀಡಲಾಗುವುದು. ಇದಕ್ಕಾಗಿ 500 ಕೋಟಿ ಮೀಸಲಿಡಲಾಗಿದೆ.ಡಯಾಲಿಸಿಸ್ ಮಹತ್ವ ನೀಡಲಾಗಿದೆ. ಕ್ಯಾನ್ಸರ್ ನಿಂದ ಬಳಲುವರಿಗೆ 10 ಹೊಸ ಕಿಮೋ ತೆರಪಿ ಕೇಂದ್ರಗಳ ತೆರೆಯಲಾಗಿದೆ.

ಹೆಣ್ಣುಮಕ್ಕಳ ಉದ್ಯೋಗ ಸೃಷ್ಟಿಗೆ 500 ಕೋಟಿ ಮೀಸಲಿಡಲಾಗಿದೆ. ಸ್ತ್ರೀ ಸಂಘಗಳಿಗೆ ಸಾಲ ನೀಡಲಾಗುವುದು. ಸ್ತ್ರೀ ಸಂಘಗಳ ಉತ್ಪನ್ನಗಳನ್ನು ಖರಿದಿ ಮಾಡಲಾಗುವುದು. ಸಹಾಯಧನ ಮಾರುಕಟ್ಟೆ ಒದಗಿಸಲಾಗುವುದು.

ಬಿಪಿಯಲ್ ಕಾರ್ಡ್ ದಾರರಿಗೆ 75 ಯುನಿಟ್ ಉಚಿತ ವಿದ್ಯುತ್ ನೀಡುವ ಯೋಜ‌ನೆ ಜಾರಿಗೆ ತರಲಾಗಿದೆ. ಯುವಕರಿಗೆ ತಂತ್ರಜ್ಞಾನ ತರಬೇತಿ ನೀಡಲಾಗಿದೆ. ರೈತ ವಿದ್ಯಾನಿಧಿ ಘೋಷಣೆ ಮಾಡಿದೆ.‌ ಕನ್ನಡಾಂಬೆ ಕಾಮದೇನು ದುಡಿದವರಿಗೆ ಬೇಡಿದ್ದನ್ನು ನೀಡುತ್ತಾಳೆ. ನವ ಕರ್ನಾಟಕ ನವ ಭಾರತದ ನಿರ್ಮಾಣ ಮಾಡುವ ಘೋಷಣೆ ಮಾಡಿದರು. ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಅವಕಾಶ ಹಾಗೂ ನ್ಯಾಯಗಳನ್ನು ಕ್ಷೇತ್ರದಲ್ಲಿ ನೀಡಲಾಗಿದೆ ಎಂದು ಮೆಚ್ಚುಗೆ ಮಾತುಗಳನ್ನು ಆಡಿದರು.

ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಸರ್ಕಾರದ ಸವಲತ್ತುಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫಲಾನುಭವಿಗಳ ಬಳಿಗೆ ತೆರಳಿ ವಿತರಿಸಿದರು.

ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಅನುದಾನದಡಿ 100 ಫಲಾನುಭವಿಗಳಿಗೆ ಯಂತ್ರಚಾಲಿತ ದ್ವಿಚಕ್ರವಾಹನ ಹಾಗೂ 2021-22ನೇ ಸಾಲಿನ ಇಲಾಖಾ ವತಿಯಿಂದ 6 ಫಲಾನುಭವಿಗಳಿಗೆ ಹಾಗೂ ಶ್ರವಣದೋಷವುಳ್ಳ ವ್ಯಕ್ತಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಶ್ರವಣದೋಷವುಳ್ಳ ಇಬ್ಬರು ಫಲಾನುಭವಿಗಳಿಗೆ ಹೊಲಿಗೆಯಂತ್ರ ವಿತರಿಸಲಾಯಿತು.

2021-22ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳಿಸಿದ ಸೃಷ್ಟಿ, ಸಂಜನಾ, ಸೌಮ್ಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಸನ್ಮಾನ ಮಾಡಲಾಯಿತು.

ಕಾರ್ಮಿಕರಿಗೆ ಹೊಲಿಗೆಯಂತ್ರ, ಅಂಬೇಡ್ಕರ್ ನಿಗಮದಿಂದ 30 ಫಲಾನುಭವಿಗಳಿಗೆ ಪಂಪ್ ಮೋಟಾರ್ ವಿತರಣೆ, ಆರೋಗ್ಯ ಇಲಾಖೆಯಿಂದ 30 ಸಾವಿರ ಫಲಾನುಭವಿಗಳಿಗೆ ಎ ಬಿ ಆರ್ ಕೆ ಕಾರ್ಡ್ ವಿತರಣೆ, ಬಸವ ವಸತಿ ಯೋಜನೆಯಡಿ 880 ಮನೆಗಳ ಕಾರ್ಯಾದೇಶ, ಕಂದಾಯ ಇಲಾಖೆಯಿಂದ ಸಾಮಾಜಿಕ ಭದ್ರತಾ ಯೋಜನೆಯಡಿ 1000 ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ, ಕೃಷಿ ಇಲಾಖೆಯಿಂದ 1000 ತಾಡಪಲ್ ವಿತರಣೆ, ಮುಖ್ಯಮಂತ್ರಿ ರೈತವಿದ್ಯಾನಿಧಿಯಡಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ, ಕಂದಾಯ ಗ್ರಾಮಗಳಿಗೆ ಹಕ್ಕುಪತ್ರ ವಿತರಣೆ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯ ವಿತರಿಸಲಾಯಿತು .

ಕಾರ್ಯಕ್ರಮದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ, ಕೇಂದ್ರ ಪಂಚಾಯತ್ ರಾಜ್ ರಾಜ್ಯ ಖಾತೆ ಸಚಿವ ಕಪಿಲ್ ಮೋನೇಶ್ವರ ಪಾಟೀಲ್, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್, ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ, ಹೊಳಲ್ಕೆರೆ ಶಾಸಕರು ಹಾಗೂ ಕೆ ಎಸ್ ಆರ್ ಟಿ ಸಿ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ, ಹಿರಿಯೂರು ಶಾಸಕಿ ಪೂರ್ಣಿಮಾ ಕೆ.ಶ್ರೀನಿವಾಸ್, ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಶಿರಾ ಶಾಸಕ ಡಾ.ರಾಜೇಶ್ ಗೌಡ, ವಿಧಾನ ಪರಿಷತ್ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ, ವಿಧಾನ ಪರಿಷತ್ ಶಾಸಕರಾದ ಚಿದಾನಂದ ಎಂ ಗೌಡ, ಕೆ.ಎಸ್.ನವೀನ್, ಅಬ್ಬಿನಹೊಳೆ ಗ್ರಾಮ ಪಂಚಾಯಿತಿ ಅದ್ಯಕ್ಷೆ ಅನುಷಾ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *