ಇಂಜನಿಯರ್ ಗಳ ಕೆಲಸ ಯಾರಿಗೂ ಅರ್ಥವಾಗ್ತಿಲ್ಲ : ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು

ಚಿತ್ರದುರ್ಗ : ಗ್ರಾಮ ಪಂಚಾಯಿತಿಗಳ ನೋಟಿಸ್ ಬೋರ್ಡ್ನಲ್ಲಿ ಪಿಡಿಒ ಹಾಗೂ ಇಂಜಿನಿಯರ್ಗಳ ಭೇಟಿ ದಿನಾಂಕ ಹಾಗೂ ಮಾಹಿತಿಯನ್ನು ಕಡ್ಡಾಯವಾಗಿ ಹಾಕಬೇಕೆಂದು ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ತಾಪಂ ಕಚೇರಿಯಲ್ಲಿ ಸೋಮವಾರ ನಡೆದ ಪ್ರಗತಿ ಪರೀಶೀಲನಾ ಸಭೆಯಲ್ಲಿ ಮಾತನಾಡಿದರು. 2 ಅಥವಾ 3 ಪಂಚಾಯಿತಿಗಳಿಗೆ ಒಬ್ಬರಂತೆ ಇಂಜಿನಿಯರ್ಗಳಿದ್ದಾರೆ. ಅವರುಗಳು ಏನು ಕೆಲಸ ಮಾಡುತ್ತಾರೆ ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ ಎಂದರು.
ತಾಲ್ಲೂಕಿನ ಹಲವಾರು ಪಂಚಾಯಿತಿಗಳಲ್ಲಿ ನರೇಗಾ ಕೆಲಸ ಸರಿಯಾದ ರೀತಿಯಲ್ಲಿ ನಡೆದಿಲ್ಲ. ಕೆಲವು ಪಂಚಾಯಿತಿಗಳು ಉತ್ತಮವಾದ ಪ್ರಗತಿ ತೋರಿಸಿದರೆ ಮತ್ತೆ ಕೆಲವು ಸಾಧನೆ ಮಾಡುವಲ್ಲಿ ಹಿನ್ನಡೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹರಾಜು ಮಾತನಾಡಿ, ಪಂಚಾಯಿತಿ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಮನಸಿಟ್ಟು ಕೆಲಸ ಮಾಡಿದರೆ ಉತ್ತಮವಾದ ಪಂಚಾಯಿತಿಯನ್ನಾಗಿ ಮಾಡಬಹುದು. ಅದರೆ ಯಾರೂ ಸಹಾ ಮಾಡುತ್ತಿಲ್ಲ. ಕೆಲವರು ಮಾತ್ರ ಅಸಕ್ತಿಯಿಂದ ಕೆಲಸ ಮಾಡುತ್ತಾರೆ. ಆಂತಹ ಪಂಚಾಯಿತಿಗಳು ಮಾತ್ರ ಪ್ರಗತಿ ಹೊಂದಲು ಸಾಧ್ಯವಿದೆ ಎಂದರು.
ಜಿಪಂ ಸದಸ್ಯೆ ಸೌಭಾಗ್ಯ ಬಸವರಾಜನ್ ಮಾತನಾಡಿ, ಕೆಲವೊಂದು ಪಂಚಾಯತಿಗಳಲ್ಲಿ ಕಂಪ್ಯೂಟರ್ ಆಪರೇಟರ್ಗಳ ಸಮಸ್ಯೆ ಇದೆ ಅದನ್ನು ಸರಿಪಡಿಸಬೇಕು. ಕೆಲವು ಪಿಡಿಓಗಳಿಗೆ ಎರಡೆರಡು ಪಂಚಾಯಿತಿಗಳ ಉಸ್ತ್ತುವಾರಿ ನೀಡಲಾಗಿದೆ ಇದನ್ನು ಸರಿಪಡಿಸಿ ಒಬ್ಬರಿಗೆ ಒಂದೇ ಪಂಚಾಯಿತಿಯನ್ನು ನೀಡುವಂತೆ ಇಓಗೆ ಸೂಚಿಸಿದರು.
ಜಿಪಂ ಸದಸ್ಯ ಗುರುಮೂರ್ತಿ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ ಸೋಲಾರ್ ಹಾಗೂ ಗಾಳಿ ಯಂತ್ರದಿಂದ ವಿದ್ಯುತ್ ತಯಾರು ಮಾಡುವ ಕಂಪನಿಗಳಿಂದ ಸರಿಯಾದ ರೀತಿಯಲ್ಲಿ ಪಂಚಾಯಿತಿಗಳು ತೆರಿಗೆಯನ್ನು ವಸೂಲಿ ಮಾಡುತ್ತಿಲ್ಲ. ಈ ಬಗ್ಗೆ ಎಚ್ಚರವಹಿಸಬೇಕು ಎಂದರು.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ನಾಯ್ಕ್, ಇಓ ಕೃಷ್ಣಾನಾಯ್ಕ್ ಇದ್ದರು.