ಕೊರೊನಾ ಮಹಾಮಾರಿ ಅಂತ್ಯಕ್ಕೆ ಕಾಲ ಸನಿಹ: ರಾಜ್ಯದಲ್ಲಿ ಸಿದ್ಧತೆ ಪ್ರಾರಂಭ

ಬೆಂಗಳೂರು :ಮನುಷ್ಯ ಸಂಕುಲವನ್ನು ಭಯದ ಕೂಪಕ್ಕೆ ತಳ್ಳಿದ್ದ ಕೊರೊನಾ ಮಹಾಮಾರಿಗೆ ಅಂತ್ಯವಾಡುವ ಕಾಲ ಸನಿಹವಾಗಿದೆ. ಈಗಾಗಲೇ ಲಸಿಕೆ ಪ್ರಯೋಗ ಕೊನೆ ಹಂತದಲ್ಲಿದ್ದು ಶೀಘ್ರ ಜನರಿಗೆ ಸಿಗುವ ನಿರೀಕ್ಷೆ ಹೆಚ್ಚಿದೆ.
ಈ ಬಗ್ಗೆ ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕೇಂದ್ರ ಸರ್ಕಾರದ ಸೂಚನೆಯಂತೆ, ಕೋವಿಡ್ ಲಸಿಕೆ ವಿತರಣೆಗೆ ರಾಜ್ಯದಲ್ಲಿ 29,451 ಲಸಿಕೆ ವಿತರಣೆ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.
ಲಸಿಕೆ ವಿತರಣೆ ಮಾಡಲು 10,008 ವ್ಯಾಕ್ಸಿನೇಟರ್ ಸಿಬ್ಬಂದಿಗಳನ್ನು ಗುರುತಿಸಲಾಗಿದೆ. ರಾಜ್ಯದಲ್ಲಿ ಲಸಿಕೆ ಸಂಗ್ರಹ ಮತ್ತು ವಿತರಣೆಗೆ 2,855 ಕೋಲ್ಡ್ ಚೇನ್ ಕೇಂದ್ರ ಲಭ್ಯವಿದೆ. ಬೆಂಗಳೂರು ನಗರ, ಶಿವಮೊಗ್ಗ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಾದೇಶಿಕ ಲಸಿಕೆ ಸಂಗ್ರಹ ಕೇಂದ್ರ ಆರಂಭಿಸಲು ಪ್ರಸ್ತಾಪಿಸಲಾಗಿದೆ.
ಸರ್ಕಾರಿ ಆರೋಗ್ಯ ಕೇಂದ್ರಗಳ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರ ಬಗೆಗಿನ ಮಾಹಿತಿಯನ್ನು ದಾಖಲಿಸಲಾಗಿದೆ. ಶೇ.80 ರಷ್ಟು ಖಾಸಗಿ ಆಸ್ಪತ್ರೆಗಳು ಮಾಹಿತಿ ಒದಗಿಸಿದ್ದು, ಇನ್ನೂ ಶೇ.20 ರಷ್ಟು ಆಸ್ಪತ್ರೆಗಳು ವಾರದೊಳಗೆ ಮಾಹಿತಿ ನೀಡಲಿವೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 10 ವಾಕ್ ಇನ್ ಕೂಲರ್ ಮತ್ತು 4 ವಾಕ್ ಇನ್ ಫ್ರೀಜರ್ ಇದೆ. ಕೇಂದ್ರ ಆರೋಗ್ಯ ಸಚಿವಾಲಯವು 3 ವಾಕ್ ಇನ್ ಕೂಲರ್, 2 ವಾಕ್ ಇನ್ ಫ್ರೀಜರ್ ನೀಡಲಿದೆ. ಇದಕ್ಕಾಗಿ ಸಿವಿಲ್ ಕಾಮಗಾರಿ ಆರಂಭವಾಗಿದೆ ಎಂದು ತಿಳಿಸಿದ್ದಾರೆ.