ರಾಜ್ಯದಲ್ಲಿ ಮುಂದಿನ 48 ಗಂಟೆಯಲ್ಲಿ ಭಾರಿ ಮಳೆ ಸಾಧ್ಯತೆ

ಬೆಂಗಳೂರು : ರಾಜ್ಯದ ಹಲವು ಭಾಗಗಳಲ್ಲಿ ಮುಂದಿನ 48 ಗಂಟೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ರಮೇಶ್ ಬಾಬು ತಿಳಿಸಿದ್ದಾರೆ.
ತೀವ್ರ ಮಳೆಯಾಗುವ ಸಾಧ್ಯತೆಗಳಿದ್ದು, ದಕ್ಷಿಣ ಕರ್ನಾಟಕದಲ್ಲಿ 64.5 ಮಿ.ಮೀ ನಿಂದ 115.5 ಮಿ.ಮೀ ಒಳಗಡೆ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಪುದುಚೇರಿಯ ಹತ್ತಿರ ಸುಮಾರು 450 ಕಿ.ಮೀ ದೂರದಲ್ಲಿ ಸೈಕ್ಲೋನ್ ಅಬ್ಬರಿಸುತ್ತಿದೆ.
ಇದರಿಂದ ಮಂಗಳವಾರ ಸಂಜೆ ಅಥವಾ ರಾತ್ರಿಯಿಂದ ಸಾಧಾರಣವಾಗಿ ಪ್ರಾರಂಭವಾಗಿ ಬುಧವಾರ, ಗುರುವಾರ ಗುಡುಗು ಸಹಿತ ಬಾರಿ ಮಳೆಯಾಗಲಿದೆ.
ಇದರ ತೀವ್ರತೆ ದಕ್ಷಿಣ ಕರ್ನಾಟಕದಲ್ಲಿ ಅತೀ ಹೆಚ್ಚು ಆಗಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಮಂಡ್ಯ, ಮೈಸೂರು, ಹಾಸನ, ರಾಮನಗರ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹೇಳಿದ್ದಾರೆ.
ಬಂಗಾಳ ಕೊಲ್ಲಿಯ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತವಾಗಿದೆ. ನ.25 ರಂದು ತಮಿಳುನಾಡು ಹಾಗೂ ಪಾಂಡಿಚೇರಿ ಕರಾವಳಿಯಲ್ಲಿ ದಾಟಿ ಕಾರೈಕಲ್, ಮಾಮಲಪುರಂ ಹತ್ತಿರ ನಿವಾರ್ ಸೈಕ್ಲೋನ್ ಆಗಮಿಸಲಿದೆ ಎಂದು ತಿಳಿಸಿದ್ದಾರೆ.