ಗ್ರಾಮ ಪಂಚಾಯತಿ ಚುನಾವಣೆ : ಗುತ್ತಿಗೆದಾರರ ಸ್ಪರ್ಧೆಗೆ ಚುನಾವಣಾ ಆಯೋಗ ಬ್ರೇಕ್

ಬೆಂಗಳೂರು : ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಈಗಾಗಲೇ ರಾಜ್ಯದಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆಸಲು ಸಿದ್ಧತೆಗಳು ಆರಂಭವಾಗಿವೆ. ರಾಜಕೀಯ ಪಕ್ಷಗಳು ಸಹ ತಯಾರಿ ನಡೆಸುತ್ತಿವೆ. ಇದರ ನಡುವೆ ಹಳ್ಳಿಗಳಲ್ಲಿ ಅಭ್ಯರ್ಥಿಗಳ ಸಂಖ್ಯೆ ಸಹ ಏರುತ್ತಿದೆ. ಇಂತಹ ಸಮಯದಲ್ಲಿ ಆಯೋಗ ಒಂದು ರೀತಿ ಶಾಕ್ ನೀಡಿದೆ.
ಗುತ್ತಿಗೆದಾರರು ಪ್ರಸ್ತುತ ಗ್ರಾಮ ಪಂಚಾಯತಿ ಕಾಮಗಾರಿ ನಿರ್ವಹಿಸುತ್ತಿದ್ದಲ್ಲಿ
ಅವರು ಗ್ರಾಪಂ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗುತ್ತಾರೆ. ಈ ವಿಷಯದಲ್ಲಿ ಚುನಾವಣಾಧಿಕಾರಿಗಳಿಗೆ ಮಾಹಿತಿ ಇಲ್ಲವಾದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ. ಒಂದು ವೇಳೆ ಅಭ್ಯರ್ಥಿಯೊಬ್ಬರು ಈ ಬಗ್ಗೆ ಮಾಹಿತಿಯನ್ನು ಸೂಕ್ತ ದೃಢೀಕರಣದೊಂದಿಗೆ ನೀಡಿದಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.
ಆಯೋಗದ ಸೂಚನೆಯಿಂದ ಈಗಾಗಲೇ ಅಖಾಡಕ್ಕೆ ಧುಮುಕಲು ಸಿದ್ಧತೆ ನಡೆಸಿದವರಿಗೆ ನಿರಾಶೆಯಾದಂತೆ ಆಗಿದೆ.